ಮಹಮ್ಮದ್ 3 - 
	ಬಹುಮನಿ ರಾಜ್ಯದ ಹದಿಮೂರನೆಯ ಸುಲ್ತಾನ (1463-82) ನಿಜಾಮುದ್ದೀನ್ ಅಹ್ಮದನ ತಮ್ಮ. ಅಣ್ಣ ಅಹ್ಮದ್ ಚಿಕ್ಕ ವಯಸ್ಸಿನಲ್ಲೇ ನಿಗೂಢ ಮರಣಕ್ಕೆ ತುತ್ತಾದಾಗ ಈತ ಶಮ್‍ಸುದ್ದೀನ್ ಮಹಮ್ಮದ್ ಎಂಬ ಹೆಸರಿನಿಂದ ಪಟ್ಟಕ್ಕೆ ಬಂದ (1463-ಜುಲೈ30) ಆಗ ಈತನಿನ್ನೂ ಹತ್ತರ ಹರೆಯದ ಬಾಲಕ ರಾಜ ಪ್ರತಿನಿಧಿ ಮಂಡಳಿ ರಾಜ್ಯದ ಆಡಳಿತ ನಿರ್ವಹಿಸುತ್ತಿತ್ತು. 1466ರಿಂದ ಈತ ಸ್ವತಃ ರಾಜ್ಯ ಸೂತ್ರ ನಿರ್ವಹಿಸಲು ಮುಂದಾದ. ಈತ ವೀರಯೋಧ, ಸಮರ್ಥ ಆಡಳಿತಗಾರ ಆದರೆ ಸ್ವಭಾವ ದುಡುಕು. ಪ್ರಧಾನ ಮಂತ್ರಿ ಮಹ್ಮೂದ್ ಗವಾನ್ ಈತನಿಗೆ ಬಲಭುಜವಾಗಿ ನಿಂತು ರಾಜ್ಯ ನಿರ್ವಹಣ ಕಾರ್ಯದಲ್ಲಿ ಮಹತ್ತರ ಪಾತ್ರವಹಿಸಿದ.

	1466ರಲ್ಲಿ ಮಾಳವದ ದೊರೆ ಮಹ್ಮೂದ್ ಬಹಮನಿ ರಾಜ್ಯದ ಭಾಗಗಳನ್ನು ಆಕ್ರಮಿಸಲು ಪ್ರಯತ್ನಿಸಿದ. ಮೊದಲು ಅವನು ಬಹಮನೀಯರನ್ನು ಸೋಲಿಸಿದರೂ ಕೊನೆಗೆ ಒಪ್ಪಂದಕ್ಕೆ ಬರಬೇಕಾಯಿತು. ಮಹ್ಮೂದ್ ಗವಾನನ ಚಾತುರ್ಯದಿಂದ ಖೇರ್ಲಮಾಳವಕ್ಕೂ ಬೀರಾರ್ ಬಹಮನೀ ರಾಜ್ಯಕ್ಕೂ ಸೇರುವಂತಾಗಿ, ಬಹಮನಿ ಮತ್ತು ಮಾಳವ ರಾಜ್ಯಗಳ ನಡುವೆ ಶಾಶ್ವತ ಶಾಂತಿ ಏರ್ಪಟ್ಟಿತು. 1470ರಲ್ಲಿ ಬಹುಮನೀ ಮತ್ತು ವಿಜಯನಗರದ ಅರಸರು ಅಪರೂಪವಾಗಿ ಒಪ್ಪಂದ ಮಾಡಿಕೊಂಡು ಒರಿಸ್ಸದ ಕಪಿಲೇಶ್ವರನ ಮೇಲೆ ದಂಡನ್ನು ಕಳುಹಿಸಿದರು. ಆ ಯುದ್ಧದಲ್ಲಿ ಕಪಿಲೇಶ್ವರ ಸೋತ. ಮುಂದೆ ಅವನ ಮರಣಾನಂತರ ಅಂತರ್ಯುದ್ಧಗಳಾಗಿ ಪಟ್ಟಕ್ಕೆ ಬಂದು ಪ್ರಬಲಿಸಿದ ಪುರುಷೋತ್ತಮನನ್ನು ಎದುರಿಸಲು ಬಹಮನೀ ಸೈನ್ಯ ಮತ್ತೆ ನಡೆದರೂ ರಾಜಮಹೇಂದ್ರಿಯನ್ನು ಹಿಡಿಯುವಷ್ಟರಲ್ಲಿಯೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 1469-72ರಲ್ಲಿ ಮಹ್ಮೂದ್ ಗವಾನನ ನೇತೃತ್ವದಲ್ಲಿ ಪಶ್ಚಿಮದತ್ತ ನಡೆದ ಬಹಮನೀ ಸೇನೆ ಗೋವ ಮತ್ತು ಸುತ್ತಲ ಪ್ರದೇಶಗಳನ್ನೆಲ್ಲ ಆಕ್ರಮಿಸಿತು. 1473ರಲ್ಲಿ ಬೆಳಗಾಂವಿಯಲ್ಲಿ ದಂಗೆಯೆದ್ದಿದ್ದ ಸ್ಥಳೀಯ ರಾಜನನ್ನು ಸುಲ್ತಾನ ಮತ್ತು ಗವಾನ್ ಸದೆಬಡಿಸರು. ರಾಜ ಲಷ್ಕರೀ ಎಂಬ ಬಿರುದು ಧರಿಸಿದ. 1478ರಲ್ಲಿ ಒರಿಸ್ಸದ ಮಧ್ಯಭಾಗದವರೆಗೂ ದಂಡೆತ್ತಿ ಹೋಗಿ ಪುರುಷೋತ್ತಮನನ್ನು ಶರಣಾಗುವಂತೆ ಮಾಡಿದ. 1481ರಲ್ಲಿ ಈತ ದಕ್ಷಿಣದಲ್ಲಿ ಕಂಚಿಯವರೆಗೂ ನುಗ್ಗಿದ. ಬಹಮನೀ ಸುಲ್ತಾನರಲ್ಲೆಲ್ಲ ಈತನಷ್ಟು ದೂರ ದಕ್ಷಿಣದ ಕಡೆಗೆ ದಂಡೆತ್ತಿ ಹೋದವರಿಲ್ಲ. ಈ ಎಲ್ಲ ಸಾಧನೆಗಳಿಂದ ಮಹಮ್ಮದನ ಕಾಲದಲ್ಲಿ ಬಹಮನೀ ರಾಜ್ಯ ಗೋವದಿಂದ ಒರಿಸ್ಸದವರೆಗೂ ವಿಸ್ತಾರಗೊಂಡಿತು. ದಖನೀ ಪಕ್ಷದವರು ಪ್ರಧಾನಮಂತ್ರಿ ಮಹ್ಮೂದ್ ಗವಾನ್ ದ್ರೋಹಿಯೆಂದು ಕುತಂತ್ರದಿಂದ ಸುಲ್ತಾನನ ಕಿವಿಯೂದಿದರು. ಇದನ್ನು ನಂಬಿದ ಸುಲ್ತಾನ ಗವಾನನ ತಲೆ ಹೊಡೆಸಿದ (1481). ಅನಂತರ ತಾನು ನಿರಪರಾಧಿಯನ್ನು ಕೊಲ್ಲಿಸಿದನೆಂದು ತಿಳಿದ ಸುಲ್ತಾನ ಪಶ್ಚಾತ್ತಾಪದಿಂದ ಬೆಂದು ಆ ಕೊರಗಿನಲ್ಲೇ ಮರಣ ಹೊಂದಿದ (26 ಮಾರ್ಚ್ 1482). 

ಮೂರನೆಯ ಮಹಮ್ಮದನ ಕಾಲ ಬಹಮನೀ ರಾಜ್ಯದ ಭವ್ಯತೆಯ ಉತ್ತುಂಗ ಕಾಲ. ಆಗ ಬಿದರೆ ವೈಭವದಿಂದ ರಾರಾಜಿಸುತ್ತಿತ್ತು. 1470ರಲ್ಲಿ ಬಿದರೆಯನ್ನು ಸಂದರ್ಶಿಸಿದ ರಷ್ಯದ ಪ್ರವಾಸಿ ಅಥನೇಸಿಯಸ್ ನಿಕಿಟಿನ್ ಈ ಪಟ್ಟಣ ಮಹಮ್ಮದೀಯ ಹಿಂದೂಸ್ಥಾನದಲ್ಲೆಲ್ಲ ಮುಖ್ಯ ಪಟ್ಟಣವೆಂದು ವರ್ಣಿಸಿದ್ದಾನೆ.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ